ಹಾಸನ: ಟಿಕೆಟ್ ನೀಡಿದ್ದಕ್ಕಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ. ರೇವಣ್ಣ ಕುಟುಂಬ ನನ್ನ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಜೆಡಿಎಸ್ ಅಭ್ಯರ್ಥಿ ಹೆಚ್.ಪಿ ಸ್ವರೂಪ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ವರೂಪ್, ಭವಾನಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಹೈಕಮಾಂಡ್ ನನಗೆ ಟಿಕೆಟ್ ನೀಡಿರುವುದು ಸಂತಸ ತಂದಿದೆ. ರೇವಣ್ಣ ಕುಟುಂಬ ನನ್ನ ಪರ ಪ್ರಚಾರಕ್ಕೆ ಬರುತ್ತಾರೆ. ಶೀಘ್ರದಲ್ಲೇ ರೇವಣ್ಣ ಅವರನ್ನು ಭೇಟಿಯಾಗುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.
ಈ ಚುನಾವಣೆ ಶಾಸಕ ಪ್ರೀತಂಗೌಡ ಹಾಗೂ ಸ್ವಾಭಿಮಾನದ ನಡುವೆ ನಡೆಯುವ ಚುನಾವಣೆಯಾಗಿದೆ. ಇಲ್ಲಿ ನಮ್ಮ ತಂದೆಯ ಕೆಲಸಗಳು ನನ್ನ ಕೈಹಿಡಿಯಲಿವೆ. ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದಿದ್ದಾರೆ. ಪಕ್ಷದ ಟಿಕೆಟ್ ಸಿಗಲು ಕಾರಣರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಧನ್ಯವಾದ ಎಂದಿದ್ದಾರೆ.
ಹಾಸನ ಟಿಕೆಟ್ ವಿಚಾರದಲ್ಲಿ ನನಗೆ ಯಾವುದೇ ಬೇಸರವಿಲ್ಲ. ನಮಗೆ ಹೆಚ್.ಡಿ.ದೇವೇಗೌಡರ ಆರೋಗ್ಯ ಮುಖ್ಯ. ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದಂತೆ ನಾವು ಕೇಳುತ್ತೇವೆ. ಹೆಚ್‌ಡಿಡಿ ಹೇಳಿದ್ರೆ ಹಾಸನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದರು.
