ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರಕ್ಕೆ ಮಾತ್ರ ಟಿಕೆಟ್ ನೀಡುವುದು ಎಂದು ಕಾಂಗ್ರೆಸ್ ಹೈಕಮ್ಯಾಂಡ್ ನಿರ್ಧರಿಸಿದೆ. ಆದರೆ ಈ ನಿರ್ಧಾರದಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುನಿಸಿಕೊಂಡಿದ್ದು, ಸಿದ್ದರಾಮಯ್ಯ ಕೋಲಾರಕ್ಕೆ ಬರದಿದ್ದರೆ ನಾನು ನಾಮಪತ್ರವನ್ನೇ ಸಲ್ಲಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ವರುಣಾ ಕ್ಷೇತ್ರ ಖಚಿತವಾಗುವುದಕ್ಕೂ ಮುನ್ನ ಕೋಲಾರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಎರಡು ತಿಂಗಳ ಹಿಂದೆಯೇ ಘೋಷಿಸಿದ್ದರು. ಆದರೆ ಹಠಾತ್ ತಮ್ಮ ಪ್ರಚಾರ ಕಾರ್ಯದಿಂದ ಹಿಂದೆ ಸರಿದಿದ್ದ ಸಿದ್ದು, ವರುಣಾದತ್ತ ಗಮನ ಹರಿಸಿದ್ದರು. ಬಳಿಕ ವರುಣಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಬಳಿಕ, ಕೋಲಾರದ ಸ್ಪರ್ಧೆ ವಿಚಾರ ಡೋಲಾಯಮಾನವಾಗಿತ್ತು. ಈ ಬಗ್ಗೆ ಸಿದ್ದರಾಮಯ್ಯ ಕೂಡ ಎಲ್ಲೂ ಸಹ ತುಟಿ ಬಿಚ್ಚಿರಲಿಲ್ಲ.
ಈಗ ವರುಣಾ ಕ್ಷೇತ್ರದಲ್ಲಿ ಸಿದ್ದು ವಿರುದ್ದ ಪ್ರಬಲ ಅಭ್ಯರ್ಥಿ ವಿ. ಸೋಮಣ್ಣನವರನ್ನು ಬಿಜೆಪಿ ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್ ನಾಯಕರು ವಿಚಲಿತರಾಗಿದ್ದು, ಸಿದ್ದರಾಮಯ್ಯ ವರುಣಾದಲ್ಲಿ ಮಾತ್ರ ಸ್ಪರ್ಧಿಸಿದರೆ ಸಂಪೂರ್ಣ ಶಕ್ತಿ, ಸಾಮರ್ಥ್ಯವನ್ನು ಒಂದೇ ಕಡೆ ವ್ಯಯಿಸಲು ಸುಲಭ ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆನ್ನಲಾಗಿದೆ.
ಆದರೆ ಈ ಬಗ್ಗೆ ರಮೇಶ್ ಕುಮಾರ್ ತೀವ್ರವಾಗಿ ಅಸಮಾಧಾನಗೊಂಡಿದ್ದು, ಅವರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಶನಿವಾರ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣ್‌ದೀಪ್ ಸಿಂಗ್ ಸುರ್ಜೇವಾಲಾ ರಮೇಶ್ ಕುಮಾರ್ ನಿವಾಸಕ್ಕೆ ತೆರಳಿ ಸಂಧಾನ ನಡೆಸಲಿದ್ದಾರೆ.
