
ಮುದ್ದೇಬಿಹಾಳ ವಿಶೇಷ ವರದಿ: ಚೇತನ ಕೆಂದೂಳಿ, ಸಂಪಾದಕರು
ಪಟ್ಟಣದ ಮಾರುತಿ ನಗರದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯ ಇತ್ತೀಚೆಗಷ್ಟೇ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರಿಂದ ಉದ್ಘಾಟನೆಗೊಂಡಿದ್ದರೂ, ವಸತಿ ನಿಲಯದ ಭದ್ರತೆ ಕುರಿತ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಸತಿ ನಿಲಯದ ಸುತ್ತಲೂ ದೃಢವಾದ ಕಲ್ಲಿನ ಕಂಪೌಂಡ್ ನಿರ್ಮಿಸಬೇಕೆಂಬ ಬೇಡಿಕೆ ವ್ಯಕ್ತವಾಗುತ್ತಿದೆ. ಪ್ರಸ್ತುತ ನಿರ್ಮಿಸಲಾಗಿರುವ ರೆಡಿಮೇಡ್ ಕಂಪೌಂಡ್ ವಿದ್ಯಾರ್ಥಿನಿಯರ ಭದ್ರತೆಗೆ ಸಾಕಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

ಶಾಸಕರ ಮಾತಿಗೂ ಕಿಮ್ಮತ್ತು ನೀಡದ ಅಧಿಕಾರಿಗಳು:
ವಸತಿ ನಿಲಯ ಉದ್ಘಾಟನೆ ದಿನದಂದೇ ವಸತಿ ನಿಲಯಕ್ಕೆ ಸಮರ್ಪಕ ಭದ್ರತೆ ಅಗತ್ಯವಿದ್ದು, ರೆಡಿಮೇಡ್ ಕಂಪೌಂಡ್ ಬದಲಾಗಿ ಕಲ್ಲಿನ ಕಂಪೌಂಡ್ ನಿರ್ಮಿಸುವಂತೆ ಶಾಸಕ ಸಿ.ಎಸ್. ನಾಡಗೌಡ PWD ಅಧಿಕಾರಿ ಎ. ಬಿ. ರೆಡ್ಡಿ ಅವರಿಗೆ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ. ಆದರೆ ನಂತರ ಸಂಪೂರ್ಣ ವಸತಿ ನಿಲಯದ ಸುತ್ತ ಕಲ್ಲಿನ ಕಂಪೌಂಡ್ ನಿರ್ಮಿಸುವ ಬದಲು, ಮುಂಭಾಗದಲ್ಲಿ ಮಾತ್ರ ಕಲ್ಲಿನ ಗೋಡೆ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕಾಮಗಾರಿಯ ಗುಣಮಟ್ಟ ಹಾಗೂ ಮೇಲ್ವಿಚಾರಣೆಯ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉಂಟಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ವಸತಿ ನಿಲಯದ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ ನಂತರ ಉಳಿದ ಕಂಪೌಂಡ್ ಕಾಮಗಾರಿ ಕೈಗೊಳ್ಳುವ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ವಿದ್ಯಾರ್ಥಿನಿಯರ ಭದ್ರತೆ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ, ವಸತಿ ನಿಲಯದ ಸುತ್ತಲೂ ಸಂಪೂರ್ಣ ಕಲ್ಲಿನ ಕಂಪೌಂಡ್ ನಿರ್ಮಿಸಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕ ಪೊಲೀಸರ ವಶಕ್ಕೆ:
ವಿದ್ಯಾರ್ಥಿನಿಯರ ವಸತಿ ನಿಲಯದ ಸುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಕಳೆದ ಒಂದು ವಾರದಿಂದ ವಸತಿ ನಿಲಯದ ಸುತ್ತಲೂ ಸದರಿ ಯುವಕ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ಕುರಿತು ವಸತಿ ನಿಲಯದ ವಾರ್ಡನ್ ಬಿರಾದಾರ ಅವರ ಗಮನಕ್ಕೂ ತರಲಾಗಿತ್ತು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಬೆಳಗಿನ ಜಾವ ವಸತಿ ನಿಲಯಕ್ಕೆ ದಿನಪತ್ರಿಕೆ ವಿತರಿಸಲು ಬಂದಿದ್ದ ಯುವಕನಿಗೆ ವಿದ್ಯಾರ್ಥಿನಿಯರು ಅನುಮಾನಾಸ್ಪದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ದಿನಪತ್ರಿಕೆ ವಿತರಕ ಹಾಗೂ ಸ್ಥಳೀಯರ ಸಹಾಯದಿಂದ ಆತನನ್ನು ಹಿಡಿದು ಮುದ್ದೇಬಿಹಾಳ ಪೊಲೀಸರಿಗೆ ಒಪ್ಪಿಸಲಾಗಿದೆ.

brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 42;
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಯುವಕನ ವಸತಿ ನಿಲಯದ ಸುತ್ತ ಓಡಾಟದ ಉದ್ದೇಶವೇನು ಎಂಬ ಕುರಿತು ತನಿಖೆ ಮುಂದುವರಿದಿದೆ. ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ವಸತಿ ನಿಲಯದ ಸುತ್ತ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
“ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದ್ದ ಯುವಕನನ್ನು ಈಗಾಗಲೇ ಪೊಲೀಸರಿಗೆ ಒಪ್ಪಿಸಿದ್ದೇನೆ. ವಸತಿ ನಿಲಯದ ಕಾಂಪೌಂಡ್ ಬಗ್ಗೆ pwd ಅಧಿಕಾರಿ ರೆಡ್ಡಿ ಅವರಿಗೆ ತಿಳಿಸಿದ್ದು ಶೀಘ್ರದಲ್ಲಿಯೇ ಕಲ್ಲಿನ ಗೋಡೆಯನ್ನು ಕಟ್ಟಿಸಿಕೊಡುವುದಾಗಿ ತಿಳಿಸಿದ್ದಾರೆ.” – ಬಸಂತಿ ಮಠ, ಸಮಾಜ ಕಲ್ಯಾಣ ಅಧಿಕಾರಿಗಳು, ಮುದ್ದೇಬಿಹಾಳ.
“ವಸತಿ ನಿಲಯದ ಸುತ್ತಲೂ ಕಲ್ಲಿನ ಕಾಂಪೌಂಡ್ ಕಟ್ಟಿಸಲು ಅನುದಾನವಿಲ್ಲ. ಇದರ ಶಾಸಕರು ಕೇವಲ ಮುಂಭಾಗದ ಕಾಂಪೌಂಡ್ ಕಲ್ಲಿನಲ್ಲಿ ಕಟ್ಟಿಸಿ ಎಂದು ಸೂಚಿಸಿದ್ದರು ಅದರಂತೆ ಗುತ್ತಿಗೆದಾರರು ತಮ್ಮ ಸ್ವಂತ ಗಣದಲ್ಲಿ ಮುಂದಿನ ಕಾಂಪೌಂಡ್ ಕಟ್ಟಿಸಿದ್ದಾರೆ. ಸುತ್ತಲೂ ಕಲ್ಲಿನ ಕಾಂಪೌಂಡ್ ಕಟ್ಟಿಸಿಕೊಡುವುದಾಗಿ ನಾನು ಯಾರಿಗೂ ಭರವಸೆ ನೀಡಿಲ್ಲ.” – ಎ.ಬಿ.ರೆಡ್ಡಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಮುದ್ದೇಬಿಹಾಳ.
